ಕ್ಯಾಲ್ಸಿಯೊಲೇರಿಯ
ಬೆಡಗಿನ ಹೂಬಿಡುವ ಅಲಂಕಾರ ಸಸ್ಯಜಾತಿ.  ಸ್ಕ್ರಾಫ್ಯುಲೇರಿಯೇಸೀ ಕುಟುಂಬಕ್ಕೆ ಸೇರಿದೆ.  ಪಾದರಕ್ಷೆಗಳನ್ನು ಹೋಲುವ ವರ್ಣರಂಜಿತ ಹೂಗಳಿಗಾಗಿ ಉದ್ಯಾನಗಳಲ್ಲಿ ಬೆಳೆಸುತ್ತಾರೆ.  ಇದರಲ್ಲಿ ಸುಮಾರು 200 ಪ್ರಭೇದಗಳಿವೆ.  ಇವುಗಳಲ್ಲಿ ಬಹುಪಾಲು ಪೆರು, ಚಿಲಿ ದೇಶಗಳ ಆಂಡಿಸ್ ಪರ್ವತ ಶ್ರೇಣಿಗಳ ಮೂಲವಾಸಿಗಳು.  ಮೆಕ್ಸಿಕೋದಲ್ಲೂ ಕೆಲವು ಪ್ರಭೇದಗಳು ಬೆಳೆಯುತ್ತವೆ.  ಹೆಚ್ಚು ಕಡಿಮೆ ಎಲ್ಲ ಪ್ರಭೇದಗಳೂ ಸುಮಾರು 2'-4' ಎತ್ತರಕ್ಕೆ ಬೆಳೆಯುವ ಮೂಲಿಕೆ ಸಸ್ಯಗಳು.  ಎಲೆಗಳು ಅಭಿಮುಖ ಜೋಡಣೆಯನ್ನು ಪ್ರದರ್ಶಿಸುತ್ತವೆ.  ಅವುಗಳ ಮೈ ಒರಟಾಗಿ ಸಣ್ಣಕೂದಲುಗಳಿಂದ ಆವೃತವಾಗಿದೆ.  ಹೂಗಳು ರೆಸೀಮ್ ಮಾದರಿಯ ಹೂಗೊಂಚಲುಗಳಲ್ಲಿ ಸಮಾವೇಶಗೊಂಡಿವೆ.  ಹೂ ದಳ ಹಳದಿ, ಊದಾ ಮುಂತಾದ ಬಣ್ಣಗಳಿಂದ ಕೂಡಿ ಚೆಲುವಾಗಿ ಕಾಣುತ್ತದೆ.  ಅಲ್ಲದೆ ಅಲ್ಲಲ್ಲೆ ಚುಕ್ಕೆಗಳೂ ಇದ್ದು ಹೂವಿನ ಅಂದ ಹೆಚ್ಚಾಗಿದೆ.  ಹೂದಳ ಎರಡು ತುಟಿಗಳಾಗಿ ಭಾಗವಾಗಿದೆ.  ಕೆಳದುಟಿ ಊದಿಕೊಂಡು ಪಾದರಕ್ಷೆಯಂತೆ ಕಾಣುತ್ತದೆ.  ಮೇಲ್ದುಟಿ ಕೆಳದುಟಿಗಿಂತ ಚಿಕ್ಕದು; ಒಂದು ರೀತಿಯ ಚೀಲದಂತಿದೆ.  ಕೇಸರಗಳು ಎರಡು.  ಫಲ ಹಲವು ಬೀಜಗಳುಳ್ಳ ಸಂಪುಟ ಮಾದರಿಯದು. 						    (ಕೆ.)

ಕ್ಯಾಲ್ಸಿಯೋಲೇರಿಯದ ಹಲವಾರು ಪ್ರಭೇದಗಳು ಜನಪ್ರಿಯವಾಗಿವೆ.  ಇವುಗಳಲ್ಲಿ ಕೆಲವು ಅಡ್ಡತಳಿಗಳೂ ಇವೆ.  ಇವನ್ನು ಮೂಲಿಕೆಗಳು ಮತ್ತು ಪೊದೆಗಳು ಎಂದು 2 ಮುಖ್ಯ ಪಂಗಡಗಳಾಗಿ ವಿಭಾಗಿಸುವುದುಂಟು.  ಮೂಲಕಿಕೆ ಬಗೆಗಳನ್ನು ಸಾಮಾನ್ಯವಾಗಿ ಬೀಜಗಳಿಂದ ವೃದ್ಧಿಸಲಾಗುತ್ತದೆ.  ಬೀಜಗಳನ್ನು ಬಿತ್ತುವ ಕಾಲ ಮಾರ್ಚ್ ಕೊನೆಯಿಂದ ಸೆಪ್ಟೆಂಬರ್ ವರೆಗೆ.  ಬೀಜಗಳು ಬಹುಸೂಕ್ಷ್ಮವಾಗಿರುವುದರಿಂದ ಅಗಲವಾದ ತಟ್ಟೆಗಳಂಥ ಕುಂಡಗಳಲ್ಲಿ ಸಮಪ್ರಮಾಣದಲ್ಲಿ ಮರಳು ಮತ್ತು ಸಸ್ಯಜನ್ಯ ಗೊಬ್ಬರಗಳನ್ನು ಹಾಕಿ ಬೀಜ ಬಿತ್ತಬೇಕು.  ನೀರು ಹಾಯಿಸುವಾಗಲೂ ಎಚ್ಚರ ವಹಿಸಬೇಕು.  ಮೇಲಿನಿಂದ ನೀರು ಹಾಕದೆ ಕುಂಡಗಳ ತಳವನ್ನು ಮಾತ್ರ ನೀರಿನೊಳಕ್ಕೆ ಅದ್ದಿ ನಿಧಾನವಾಗಿ ಕುಂಡದ ಬುಡದ ರಂಧ್ರಗಳ ಮೂಲಕ ನೀರು ಮೇಲೇರುವಂತೆ ಮಾಡಬೇಕು. ಹೀಗೆ ಮಾಡಿದರೆ ಬೀಜಗಳು ಸ್ಥಳಾಂತರಗೊಳ್ಳುವುದಿಲ್ಲ.  ಉಷ್ಣತೆ 150 ಸೆಂ. ಇರುವಂತೆ ನೋಡಿಕೊಳ್ಳಬೇಕು.  ಆಗ ಬೀಜಗಳು ಮೊಳೆಯುತ್ತವೆ.  ಸಸಿಗಳು ಸಾಕಷ್ಟು ದೊಡ್ಡವಾದ ಮೇಲೆ ದೊಡ್ಡ ಕುಂಡಗಳಿಗೆ ವರ್ಗಾಯಿಸಬೇಕು. ಆಗಿಂದಾಗ್ಗೆ ಗೊಬ್ಬರದ ನೀರನ್ನು (ಮೂರು ಗ್ಯಾಲನ್ ನೀರಿನಲ್ಲಿ ಒಂದು ಹಿಡಿ ದನದ ಗೊಬ್ಬರ ಹಾಕಿ ತಯಾರಿಸಿದ ಮಿಶ್ರಣ) ಹಾಕುತ್ತಿರಬೇಕು

ಪೊದೆಯಂತೆ ಬೆಳೆಯುವ ಕ್ಯಾಲ್ಸಿಯೊಲೇರಿಯ ಬಗೆಗಳನ್ನು ಕಾಂಡ ತುಂಡುಗಳಿಂದ ವೃದ್ಧಿಸಲಾಗುತ್ತದೆ.  ಎರಡು ಎಲೆಗಳಿರುವ ತುಂಡುಗಳನ್ನೇ ಆಯ್ದು ನಾಟಿ ಮಾಡುವುದೇ ರೂಢಿಯಲ್ಲಿರುವ ಕ್ರಮ.
ಕ್ಯಾಲ್ಸಿಯೊಲೇರಿಯದ ಜನಪ್ರಿಯ ಪ್ರಭೇದಗಳಲ್ಲಿ ಹಳದಿ ಹೂ ಬಿಡುವ ಕ್ರೆನಾಟಿ ಪೋಲಿಯ, ಕೋರಿಂಬೋಸ ಮತ್ತು ಬೈಫ್ಲೋರಗಳೂ ಊದಾ ಬಣ್ಣದ ಹೂ ಬಿಡುವ ಪಫ್ರ್ಯೂರಿಯ, ಅರ್ಯಾಕ್ನಾಯ್ಡಿಯ ಮತ್ತು ಹರ್ಬಿಯೊಹೈಬ್ರಿಡಗಳೂ ಮುಖ್ಯವಾದವು. *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ